ಆವತ್ತು ಮಳೆ ಧಾರಾಕಾರವಾಗಿ ಹೊರಗೆ ಸುರಿಯುತ್ತಿತ್ತು. ಮನೆಯ ಹಿಂಬದಿಯ ಬಾಲ್ಕನಿ ಬಾಗಿಲು ಮೆಲ್ಲಗೆ ಸರಿಸಿ ಸ್ವಲ್ಪ ಹೊತ್ತು ಹೊರಗೆ ನೋಡುತ್ತಾ ನಿಂತೆ.. ಮರದ ಡೆಕ್ಕಿನ ಮೇಲೆ ಪಟ ಪಟ ಸದ್ದು ಮಾಡುತ್ತ ಬೀಳುವ ಹನಿಗಳು ಅಚ್ಚ ಹೊಸ ತಾಳದಲ್ಲಿ ಒಂದೇ ಸಮನೆ ಸಂಗೀತ ನುಡಿಸಿದಂತೆ ಅನಿಸಿತು. ನನ್ನ ಮೂರು ವರುಷದ ಮಗಳು ತಾನು ಹಿಡಿದಿದ್ದ ಕೊಡೆಯನ್ನು ಗಿರಗಿರನೆ ತಿರುಗಿಸಿ ಹನಿಗಳು ನನ್ನ ಮುಖಕ್ಕೆ ಬಿದ್ದಾಗಲೇ ನನ್ನ ಕನಸಿನ ಪುರವಣಿಗೆ ತೆರೆ ಬಿದ್ದಿದ್ದು. ಅವಳು ಆಚೇಚೆ ಓಡಾಡುತ್ತ ಮಳೆ ಹನಿಗಳೊಂದಿಗೆ ಮುಟ್ಟಾಟ ಆಡುತ್ತಿರುವಳೋ ಎಂದು ಭಾಸವಾಯಿತು. ಒಂದೆಡೆಗೆ ನನಗೆ ಅವಳಂತೆ ಮಳೆಯಲ್ಲಿ ನೆನೆದು ಮುಕ್ತವಾಗಿ ಹನಿಗಳೊಡನೆ ಚಕ್ಕ್ಂದವಾಡಲು ಸಾಧ್ಯವಿಲ್ಲದಿದ್ದುದರ ಬಗ್ಗೆ ಅಸೂಯೆಯ ಭಾವನೆ ಹೀಗೆಯೇ ಸುಳಿಯಿತು ಮನದೊಳಗೆ. ಹಿತ್ತಲಿಗಂಟಿಕೊಂಡು ಇರುವ ಆ ಅಂಕುಡೊಂಕಾದ ಮರ ಗಾಳಿಯ ರಭಸಕ್ಕೆ ಕುಡಿತದ ಅಮಲಿಗೆ ತೂಗುವಂತೆ ಅತ್ತಿತ್ತ ಅಲ್ಲಾಡುತ್ತಿತ್ತು. ಅದರ ಎಲೆಗಳ ಮೇಲೆ ಬಿದ್ದ ಹನಿಗಳು ಪುಟ್ಟ ಮಕ್ಕಳು ಜಾರುಬಂಡಿಯಲಿ ಕೂತು ಜಾರಿದಂತೆ ನೆಲಕ್ಕೆ ಜಾರಿ ಬೀಳುತ್ತಿದ್ದವು.
ಆಸೆ ಹೊತ್ತು ತಂದ ಮಳೆಹನಿಗಳು
ಮನದ ಬಾಗಿಲ ತಟ್ಟಿ ಭುವಿಗರ್ಪಿತವಾದವು
ಎಲೆಗಳ ಮೇಲೆ ಸ್ಪಟಿಕಮಣಿಗಳಂತೆ ತೋರಿ
ಕ್ಷಣದಲ್ಲೇ ಜಾರುತಲಿ ಮಾಯವಾದವು ಯಾಕೋ..
ಕಪ್ಪು ದಟ್ಟವಾದ ಮೋಡಗಳ ಮಧ್ಯದಿಂದ ಸೂರ್ಯ ತನ್ನ ಕಿರಣಗಳ ಸೂಸಲು ಅತಿಯಾಗಿ ಕಷ್ಟ ಪಡುತ್ತಿರುವನೋ ಎಂಬಂತೆ ಕಾಣುತ್ತಿತ್ತು. ಮಳೆಯ ನೀರಿನ ರಭಸಕ್ಕೋ ಏನೋ ಡೆಕ್ಕಿನ ಕೆಳಗೆ ಸಮೀಪದಲ್ಲೇ ಪುಟ್ಟ ಕಾಲುವೆಯಲ್ಲಿ ನೀರು ಹರಿದುಹೋಗಲು ಶುರುವಾಗಿತ್ತು. ಮಗಳು ’boat ಮಾಡಿಕೊಡು’ ಅಂದಾಗ ಬಾಲ್ಯದ ಒಂದೊಂದು ಕ್ಷಣಗಳು ಕಣ್ಣೆದುರೇ ಮೂರ್ತಿವೆತ್ತಂತೆ ಕಾಡಿದವು ಯಾಕೋ ಆ ಹೊತ್ತಿಗೆ.. ಮಳೆಯಲ್ಲಿ ನೆನೆದು ತೊಯ್ದು ಮನೆಯೊಳಗೆ ಬಂದಾಗ ’ಅಯ್ಯಯ್ಯೋ.. ಎಲ್ಲ ಕೊಚ್ಚೆ ಮನೆ ಒಳಗೆ ತರ್ಬೇಡ..ತಲೆ ಒರೆಸ್ತೀನಿ ಬಾ..ಶೀತ ಆಗುತ್ತೆ’ ಅನ್ನುತ್ತಿದ್ದ ಅಮ್ಮನ ಪ್ರೀತಿ,ಕಳವಳ ತುಂಬಿಕೊಂಡ ಗದರಿಕೆಯ ಮಾತುಗಳು ಕಿವಿಯೊಳಗೆ ಗೊಯ್ಯ್‍ಗುಟ್ಟಿದವು ಒಮ್ಮೆ.. मुजकॊ लॊटा दो बचपन का सावन ... वो कागज़ कि कष्टी .. वॊ बारिश का पानि..
ಮರೀಚಿಕೆಯಂತೆ ಅಲ್ಲವೇ ಆ ಸುಂದರ ದಿನಗಳು
ಮುಗ್ಧತೆಯ ಮುಗುಳುನಗು ಆಟಪಾಠಗಳ ಬಿರುಸು
ಒಂದೊಂದು ಘಟನೆಯೂ ಆಹಾ ಅದೆಂಥಹ ಸೊಗಸು
ನೀರುಳ್ಳಿ ಬಾಜಿ ಮಾಡಲೆಂದು ಒಲೆಯ ಮೇಲಿಟ್ಟ ಎಣ್ಣೆಯು ಕೊತಕೊತನೆ ಕುದಿದು ಚಟಪಟಗುಟ್ಟಿದಾಗಲೇ ಮಳೆಕನಸಲ್ಲಿ ಮುಳುಗಿದ್ದ ನನಗೆ ಇಹಪ್ರಪಂಚದ ಬಗ್ಗೆ ಅರಿವಾಗಿದ್ದು. ಕೈಯಲ್ಲಿದ್ದ ಗ್ಲಾಸು ನೋಡಿದರೆ ತಣ್ಣಗಾಗಿದ್ದ ’morning coffee’ ಅಣಕಿಸಿ ನಗಾಡಿತು. ಕನಸುಗಳನ್ನೆಲ್ಲ ಮತ್ತೆ ನನ್ನ ಮನದ ಬುಟ್ಟಿಯೊಳಗಿಟ್ಟು ಅಡುಗೆಕೋಣೆಯ ಕಡೆಗೆ ಧಾವಿಸಿದೆ.
ಕನಸುಗಳಿಗೆ ಮತ್ತೆ ಹಬ್ಬ ಇನ್ನೊಮ್ಮೆ ಮಳೆರಾಯ ಭೇಟಿ ಕೊಟ್ಟಾಗ..
- ಉಷೈ
Posted by ಉಷೈ
PrintPDF
For Further Reading,
0 comments:
Post a Comment